ಹೇರ್ ಕಟಿಂಗ್ ಮತ್ತು ಹಾವೇರಿ ಸಮಾವೇಶ.

ಅಂದು ಭಾನುವಾರ ಡಿಸೆಂಬರ್ 9, ದೀಪಾವಳಿ ಮುಗಿದ ಮೇಲೆ ಮೊದಲನೇ ಬಾರಿ ವೀಕೆಂಡ್ನಲ್ಲಿ ದಾವಣಗೆರೆಗೆ ಹೋಗಿದ್ದೆ. ಮನೆಯಲ್ಲಿ ಶೇವ್ ಮಾಡಿಲ್ಲ ತಲೆ ಕೂದಲು ಉದ್ದ ಆಗಿದೆ ಅಂತ ಮಂಗಳಾರತಿ ಆದಮೇಲೆ ಕಟಿಂಗ್ ಶಾಪ್ ಗೆ ಹೋದೆ. ನನಗೆ ತಿಳಿದ ಹಾಗೆ ನನ್ನ ಯಾವ ಸ್ನೇಹಿತರು ಪ್ರತಿ ದಿನ ಶೇವ್ ಮಾಡುವುದಿಲ್ಲ, ವಾಸುದೇವನನ್ನು ಹೊರತುಪಡಿಸಿ(ಅವನು ದಿನಕ್ಕೆ 2 ಬಾರಿ ಶೇವ್ ಮಾಡಿದ್ದು ಉಂಟು).  ಪ್ರತಿ ದಿನ ಶೇವ್ ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ನಾನಂತೂ ವಾರಕ್ಕೆ 1 ಇಲ್ಲ 2 ಬಾರಿ ಮಾತ್ರ  ಶೇವ್ ಮಾಡೋದು ವಾಡಿಕೆ. ಮನೆಯಲ್ಲಿ ಇದು ಯಾಕೆ ಅರ್ಥ ಆಗೋಲ್ಲ ನನಗಂತೂ ಗೊತ್ತಿಲ್ಲ.

ಅಂದು ಕಟಿಂಗ್ ಶಾಪ್  ನಲ್ಲಿ ತುಸು ಹೆಚ್ಚಾಗೆ ಜನರಿದ್ದರು. ಎಲ್ಲರ ಬಾಯಲ್ಲೂ ಒಂದೇ ಮಾತು ಹಾವೇರಿ ಸಮಾವೇಶ. ಯಡಿಯೂರಪ್ಪನವರು, KJP, BJP, ಎಷ್ಟು ಜನ MLA ಹಾವೇರಿಗೆ ಬರುತ್ತಾರೆ ಹೀಗೆ ಒಂದು ಸಂವಾದ ಕಾರ್ಯಕ್ರಮವೇ ನಡೆದು ಹೋಯಿತು. ಅಲ್ಲಿದ್ದವರಲ್ಲಿ ಹೆಚ್ಚಿನವರು ಹಾವೇರಿ ಸಮಾವೇಶಕ್ಕೆ ಹೋಗುವವರೇ ಆಗಿದ್ದರು, ಅವರು ಕಟಿಂಗ್ ಶಾಪ್  ಗೆ  ಬಂದಿದ್ದು ಅದೇ ಕಾರಣಕ್ಕೆ. ನಾವು ಇಂಟರ್ವ್ಯೂ ಗು  ಸಹ ಇಷ್ಟು ರೆಡಿ ಆಗಿ ಹೋಗಲ್ಲ ಬಿಡಿ!.  ಸುಮಾರು 8 ಗಂಟೆ ಹೊತ್ತಿಗೆ KJP ಪಕ್ಷದ  ಮತ್ತು ಯಡಿಯೂರಪ್ಪನವರ ಬ್ಯಾನರ್ ಇರುವ ಬಸ್ ಗಳು ಹಾವೇರಿ ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬಂದವು. ಅಲ್ಲಿದ್ದವರಲ್ಲಿ ಕೆಲವರ ಚಡಪಡಿಕೆ ಜಾಸ್ತಿ ಆಯಿತು. ಕಟಿಂಗ್ ಮಾಡುವವ ಹೇಳಿದ “ಇದಿನ್ನೂ ಮೊದಲನೇ ಬಸ್ಸು ಇನ್ನು ಬಾಳ ಬಸ್ ಬರ್ತವೆ ಬಿಡ್ರಿ”. ಒಂದು ಗಂಟೆ ಕಾದು ನನ್ನ ಕಟಿಂಗ್ ಮುಗಿಸಿ ಹೊರಗಡೆ ಬಂದೆ. ಅಲ್ಲೇ ಇದ್ದ ಗಣಪತಿ ದೇವಸ್ಥಾನದಲ್ಲಿ  ಈ ಬಸ್ಸುಗಳಿಗೆ ಪೂಜೆ ಮಾಡಿಸಿ, ನಿಂಬೆ ಹಣ್ಣು  ತುಳಿಸಿ, ಬಿಳಿ ಪಂಚೆಯ ಪುರುಷರನ್ನು  ರೇಷ್ಮೆ ಸೀರೆ ಉಟ್ಟ ಒಂದಿಷ್ಟು ಮಹಿಳಾಮಣಿಗಳನ್ನೂ  ಹತ್ತಿಸಿಕೊಂಡು ಡ್ರೈವರ್ ಹೊರಟ. ಆಗ ನನಗೆ ಅನ್ನಿಸಿದ್ದು “ಜನ  ಮರುಳೋ ಜಾತ್ರೆ ಮರುಳೋ”.

ಒಂದಿಷ್ಟು  ವಿರಾಮದ ನಂತರ, ಮಧ್ಯಾನ್ನ ನನ್ನ ರೈಲ್ವೆ ಟಿಕೆಟ್ (ಹುಬ್ಬಳಿ-ಚೆನ್ನೈ ಎಕ್ಸ್ ಪ್ರೆಸ್ ) confirm ಆಗಿರದ ಕಾರಣ, ನೋಡೋಣ ಯಾವುದಾದರೂ ಟ್ರಾವೆಲ್ಸ್ ನಲ್ಲಿ ವಿಚಾರಿಸಿದರೆ ಬಸ್ ನಲ್ಲಿ ಟಿಕೆಟ್ ಸಿಗಬಹುದು ಎಂಬ ಭರವಸೆಯೊಂದಿಗೆ ಮನೆ ಬಿಟ್ಟೆ. ದಾವಣಗೆರೆ ಕ್ಲಬ್ಬಿನ ಮುಂದೆ ಸರಕಾರಿ ನೌಕರರಂತೆ ಕಾಣುತ್ತಿದ್ದ ಕೆಲವರ ಬಾಯಲ್ಲೂ ಅದೇ ಮಾತು. ಪ್ರವಾಸಿ ಮಂದಿರದ ಮುಂದೆ ಗೂಟದ ಕಾರುಗಳ ದಂಡೇ ಇತ್ತು. ಹಳೇ ಬಸ್ ಸ್ಟಾಂಡ್ ನ ಬಳಿ ಇರುವ ಕೆಲವು ಟ್ರಾವೆಲ್ಸ್ ನಲ್ಲಿ ವಿಚಾರಿಸಿದೇ, ಯಾರು  ಕ್ಯಾರೆ ಅನ್ನಲಿಲ್ಲ. ಎಲ್ಲ ಹಾವೇರಿ ಸಮಾವೇಶದ ಕಲೆಕ್ಷನಲ್ಲಿ ಬ್ಯುಸಿ ಆಗಿದ್ದರು. ಮನದಲ್ಲೇ ಎಲ್ಲರಿಗೂ ಬೈದು, ನನ್ನ fastrack ವಾಚಿಗೆ ಒಂದು ಸೆಲ್ ಹಾಕಿಸಿಕೊಂಡು “ಬಂದ ದಾರಿಗೆ ಸುಂಕವಿಲ್ಲ” ಎಂದು ಮನೆಗೆ ಹಿಂತಿರುಗಿದೆ. ನನ್ನ ಪುಣ್ಯಕ್ಕೆ ರೈಲ್ವೆ ಟಿಕೆಟ್ confirm ಆಯ್ತು ಬಿಡಿ. 

ಭವಿಷ್ಯದಲ್ಲಿ  “KJP ಎಂಬ ಪ್ರಾದೇಶಿಕ ಪಕ್ಷ ಯಶಸ್ವಿ ಆಗುವುದೇ ? ಯಡಿಯೂರಪ್ಪನವರು ಕರ್ನಾಟಕದ ಹಣೆಬರಹ ಬದಲಾಯಿಸುವರೆ ? ಇಲ್ಲ ಅವರ ಹಣೆಬರಹವೇ ಬದಲಾಗುವುದೇ ?” ವಿಚಾರ ಏನೇ ಇರಲಿ ಏನಾದರು, ಬರೆಯಬೇಕೆಂಬ ಅಭಿಲಾಷೆ ಮನದಲ್ಲಿ ತುಂಬಾ ದಿನಗಳಿಂದ ಇತ್ತು. ಅದು ಈಡೇರಿದ ಸಂತೋಷದಲ್ಲಿ ಯಡಿಯೂರಪ್ಪನವರಿಗೂ, ಅವರ KJP ಪಕ್ಷಕ್ಕೂ ಶುಭವಾಗಲೆಂದು ಹಾರೈಸುವ ನಾನು ನಿಮ್ಮ ಪ್ರೀತಿಯ ಗೆಳೆಯ ಅರುಣ್ ಕುಮಾರ್ ಆಲೂರು ಮಠ.

Advertisements

ಅನುಸಂಧಾನ – ನನ್ನ ಮೊದಲ ಬ್ಲಾಗು

ಅನುಸಂಧಾನ – ನನ್ನ ಮೊದಲ ಬ್ಲಾಗು

ನಾನು ನಿಮ್ಮ ಪ್ರೀತಿಯ ಗೆಳೆಯ ಅರುಣ್ ಕುಮಾರ್. ನನ್ನ ಮನಸ್ಸಿನ ವಿಚಾರ ಮತ್ತು ಪರಿಕಲ್ಪನೆಗಳನ್ನು ಹಂಚಿಕೊಳ್ಳುವ ಸಲುವಾಗಿ ಮಾಡಿರುವ ಒಂದು ಸಣ್ಣ ಪ್ರಯತ್ನ. ಮೊದಲ ಪ್ರಯತ್ನದಲ್ಲಿ ತಪ್ಪುಗಳು ಸಹಜ. ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ತೀಡಿ ಮನ್ನಿಸುವಿರಿ ಎಂದು ಆಶಯಿಸುತ್ತೇನೆ.

ಬ್ಲಾಗು ಬರೆಯಲು ಸ್ಪೂರ್ತಿಯಾದ ಕವಿ ಗಣೇಶ ಅವರಿಗೆ ನನ್ನ ದನ್ಯವಾದಗಳು.

ಮನಸ್ಸಿಗೆ ತೋಚಿದ್ದನ್ನು ಗೀಚುವ
ಇಂತಿ ನಿಮ್ಮ ,
ಅರುಣ